ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರನ್ನು ಮರುಸೇರ್ಪಡೆಗೊಳಿಸಲು ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಸಮಗ್ರ ಪರಿಶೀಲನಾ ಅಭಿಯಾನ ಕೈಗೊಳ್ಳುವಂತೆ ಸೂಚಿಸಿದೆ.
ಎಸ್ಐಆರ್ ಬಳಿಕ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯಿಂದ ಸುಮಾರು 13 ಕೋಟಿ ಹೆಸರುಗಳು ಕೈಬಿಡಲಾಗಿದೆ ಎಂಬ ವಿಚಾರದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಚುನಾವಣಾ ಆಯೋಗವು ಈ ಕುರಿತು ನಿರ್ದೇಶನ ನೀಡಿದೆ.
ಮತದಾರರ ನೋಂದಣಿ ನಿರಂತರ ಪ್ರಕ್ರಿಯೆಯಾಗಿದ್ದು, ಎಸ್ಐಆರ್ ಅವಧಿಯಲ್ಲಿ ನೋಂದಣಿಯಾಗದ ಕಾರಣಕ್ಕೆ ಯಾವುದೇ ಅರ್ಹ ನಾಗರಿಕನ ಮತದಾನದ ಹಕ್ಕು ನಿರಾಕರಿಸಬಾರದು ಎಂದು ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಿ ಅಧಿಕಾರಿಗಳಿಗೆ (ERO) ಆಯೋಗ ಸೂಚಿಸಿದೆ.
ಅಭಿಯಾನದಡಿ ಬೂತ್ ಮಟ್ಟದ ಅಧಿಕಾರಿಗಳು (BLO) ಹಾಲಿ ಮತದಾರರ ಪಟ್ಟಿಯನ್ನು ಎಸ್ಐಆರ್ ಪೂರ್ವದ ಪಟ್ಟಿಯೊಂದಿಗೆ ಹೋಲಿಕೆ ಮಾಡಿ, ಹೆಸರು ಕಾಣೆಯಾಗಿರುವ ಮತದಾರರ ಬೂತ್ವಾರು ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಬಳಿಕ ಮನೆ-ಮನೆಗೆ ಭೇಟಿ ನೀಡಿ ಮತದಾರರ ಪ್ರಸ್ತುತ ಸ್ಥಿತಿಗತಿಯನ್ನು ಪರಿಶೀಲಿಸಲಿದ್ದಾರೆ.
ಪ್ರತಿ BLO ವಾರಕ್ಕೆ ಕನಿಷ್ಠ 20ರಿಂದ 25 ಮನೆಗಳಿಗೆ ಭೇಟಿ ನೀಡಿ, ಸುಮಾರು ಒಂದು ತಿಂಗಳೊಳಗೆ ಪರಿಶೀಲನಾ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ. ಅರ್ಹ ಮತದಾರರಿಂದ ನಮೂನೆ-6 ಪಡೆದು ಮರುನೋಂದಣಿ ಪ್ರಕ್ರಿಯೆಗೆ ಅಧಿಕಾರಿಗಳು ನೆರವಾಗಲಿದ್ದಾರೆ.
ಪರಿಶೀಲನೆ ವೇಳೆ ಮೊದಲ ಬಾರಿಗೆ ಮತದಾನ ಮಾಡುವವರು, ಯುವ ಮತದಾರರು ಹಾಗೂ ಅಂಚಿನಲ್ಲಿರುವ ಅರ್ಹ ನಾಗರಿಕರನ್ನು ಗುರುತಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ BLOಗಳು ಸಿದ್ಧಪಡಿಸುವ ಪಟ್ಟಿಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್ಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಸ್ವೀಕರಿಸಲಾದ ಅರ್ಜಿಗಳನ್ನು ಜನಪ್ರತಿನಿಧಿ ಕಾಯ್ದೆ–1950 ಹಾಗೂ ಮತದಾರರ ನೋಂದಣಿ ನಿಯಮಗಳು–1960ರ ಅನ್ವಯ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಇದರ ಜತೆಗೆ ರಾತ್ರಿ ಆಶ್ರಯ ಕೇಂದ್ರಗಳು, ಕಾರ್ಮಿಕರ ವಸತಿ ಪ್ರದೇಶಗಳು ಹಾಗೂ ನಿರಾಶ್ರಿತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ವಿಶೇಷ ಮತದಾರರ ನೋಂದಣಿ ಶಿಬಿರಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ಸ್ವೀಪ್ (SVEEP) ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸುವ ಕಾರ್ಯವೂ ಮುಂದುವರಿಯಲಿದೆ.
