ಕರಾವಳಿ ಕಥೆಗೆ ಹೊಸ ಸ್ಪರ್ಶ: ನವೆಂಬರ್‌ನಲ್ಲಿ ಸೂಚನ್ ಶೆಟ್ಟಿ ನಿರ್ದೇಶನದ ‘ಗಾಡ್ ಪ್ರಾಮಿಸ್’ ರಿಲೀಸ್

ಕರಾವಳಿ ಕಥೆಗೆ ಹೊಸ ಸ್ಪರ್ಶ: ನವೆಂಬರ್‌ನಲ್ಲಿ ಸೂಚನ್ ಶೆಟ್ಟಿ ನಿರ್ದೇಶನದ ‘ಗಾಡ್ ಪ್ರಾಮಿಸ್’ ರಿಲೀಸ್

ಕರಾವಳಿಯ ಮಣ್ಣಿನಲ್ಲಿ ಹುಟ್ಟಿದ ಕಥೆಯೊಂದು ಇದೀಗ ಬೆಳ್ಳಿತೆರೆಯ ಮೇಲೆ ತನ್ನದೇ ಹೆಜ್ಜೆ ಗುರುತು ಮೂಡಿಸಲು ಸಿದ್ಧವಾಗಿದೆ. ‘ಗಾಡ್ ಪ್ರಾಮಿಸ್’ ಮೂಲಕ ಒಂದು ಹೊಸ ತಂಡದ ಹೊಸ ಕನಸೊಂದು ನವೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ಕರಾವಳಿಯ ಮಣ್ಣಿಗೆ ತನ್ನದೇ ಆದ ಕಥೆಗಳಿವೆ. ಇಲ್ಲಿನ ಬದುಕಿಗೆ ತನ್ನದೇ ಆದ ಬಣ್ಣವಿದೆ. ಸಂಬಂಧಗಳಿಗೆ ಭಾವನೆಗಳಿವೆ. ಸಂಸ್ಕೃತಿಗೆ ತನ್ನದೇ ಆದ ಸೊಗಡಿದೆ. ಈ ಎಲ್ಲವನ್ನೂ ಬೆಳ್ಳಿತೆರೆಗೆ ತರುವ ಪ್ರಯತ್ನಗಳು ನಡೆದಾಗಲೆಲ್ಲಾ ಕನ್ನಡ ಸಿನಿರಂಗದಲ್ಲಿ ಹೊಸ ಕುತೂಹಲ ಹುಟ್ಟುತ್ತದೆ. ಇದೀಗ ಅಂತಹದ್ದೇ ಒಂದು ಹೊಸ ಪ್ರಯತ್ನ ‘ಗಾಡ್ ಪ್ರಾಮಿಸ್’.

‘ಕಾಂತಾರ’ದ ಬಳಿಕ ಕರಾವಳಿಯ ನೆಲ, ಇಲ್ಲಿನ ಸಂಸ್ಕೃತಿ ಮತ್ತು ಜನಜೀವನದ ಕಥೆಗಳತ್ತ ಸಿನಿಪ್ರೇಕ್ಷಕರ ಗಮನ ಮತ್ತಷ್ಟು ಹೆಚ್ಚಿರುವ ಸಂದರ್ಭದಲ್ಲಿ, ಇದೇ ಮಣ್ಣಿನ ಸೊಗಡನ್ನು ಹೊತ್ತು ‘ಗಾಡ್ ಪ್ರಾಮಿಸ್’ ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದೆ. ವಿಶೇಷವೆಂದರೆ, ಈ ಚಿತ್ರದ ಸಾರಥ್ಯ ವಹಿಸಿರುವವರು ಕರಾವಳಿಯ ಪ್ರತಿಭೆ ಸೂಚನ್ ಶೆಟ್ಟಿ.

ನಾಯಕನಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದರ ಜತೆಗೆ ನಿರ್ದೇಶಕರ ಕುರ್ಚಿಯಲ್ಲೂ ಕುಳಿತುಕೊಂಡಿರುವ ಸೂಚನ್ ಶೆಟ್ಟಿ, ತಮ್ಮದೇ ನೆಲದ ಕಥೆಯನ್ನು ತಮ್ಮದೇ ದೃಷ್ಟಿಕೋನದಲ್ಲಿ ಹೇಳಲು ಹೊರಟಿದ್ದಾರೆ. ಚಿತ್ರ ನವೆಂಬರ್‌ನಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ.

ಪ್ರೇಕ್ಷಕರಿಗೆ ಸೂಚನ್ ಶೆಟ್ಟಿ ಎಂದಾಕ್ಷಣ ನೆನಪಾಗುವ ಪಾತ್ರ ‘ಕಾಂತಾರ’ದ ಫಾರೆಸ್ಟರ್ ರವಿ. ಆ ಪಾತ್ರದ ಮೂಲಕ ಗಮನ ಸೆಳೆದಿದ್ದ ಅವರು, ನಂತರ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ ‘ಕಡಲ್’ ಚಿತ್ರದಲ್ಲಿ ವಿಲನ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು.

ನಟನೆಯ ಜತೆಗೆ ಕನ್ನಡದ ಹಲವು ಚಿತ್ರಗಳ ಪ್ರಮೋಶನಲ್ ಕೆಲಸಗಳಲ್ಲೂ ಸಕ್ರಿಯರಾಗಿರುವ ಸೂಚನ್ ಶೆಟ್ಟಿ, ಇದೀಗ ತಮ್ಮ ಸಿನಿ ಪಯಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

‘ಗಾಡ್ ಪ್ರಾಮಿಸ್’ ಮೂಲಕ ನಾಯಕನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ತಮ್ಮದೇ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಕರಾವಳಿ ಎಂದಾಕ್ಷಣ ಕೇವಲ ದೈವಾರಾಧನೆ ಅಥವಾ ಪ್ರಕೃತಿ ಸೌಂದರ್ಯವಷ್ಟೇ ಅಲ್ಲ. ಇಲ್ಲಿನ ಜನರ ಬದುಕು, ಅವರ ಸಂಬಂಧಗಳು, ಕನಸುಗಳು, ಭಾವನೆಗಳು, ಸಂಘರ್ಷಗಳು ಮತ್ತು ಮಣ್ಣಿನೊಂದಿಗೆ ಬೆಸೆದುಕೊಂಡಿರುವ ನಂಟು—ಇವೆಲ್ಲವೂ ಸೇರಿ ಒಂದು ವಿಶಿಷ್ಟ ಜಗತ್ತನ್ನು ಸೃಷ್ಟಿಸುತ್ತವೆ.

ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಗುಟ್ಟಾಗಿಯೇ ಇಟ್ಟಿದ್ದರೂ, ಈಗಾಗಲೇ ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೊ ಚಿತ್ರದ ಹಿನ್ನೆಲೆ ಹಾಗೂ ದೃಶ್ಯ ವೈಭವದ ಬಗ್ಗೆ ಕುತೂಹಲ ಮೂಡಿಸಿದೆ. ಪ್ರೇಕ್ಷಕರಿಗೆ ಸದಭಿರುಚಿಯ ಕಥೆಯೊಂದನ್ನು ನೀಡಬೇಕು ಎಂಬ ಉದ್ದೇಶದಿಂದ ಚಿತ್ರತಂಡ ಸಾಕಷ್ಟು ಪರಿಶ್ರಮಪಟ್ಟಿದೆ.

ಚಿತ್ರದ ನಾಯಕಿಯಾಗಿ ಜೂಹಿ ಜಯಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ‘ಪವಿ ಕೇರ್‌ಟೇಕರ್’ ಹಾಗೂ ‘ತಲೈವನ್ ತಲೈವಿ’ ಚಿತ್ರಗಳ ಮೂಲಕ ಗಮನ ಸೆಳೆದಿರುವ ಜೂಹಿ, ‘ಗಾಡ್ ಪ್ರಾಮಿಸ್’ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪ್ರವೇಶಿಸುತ್ತಿದ್ದಾರೆ.

ಸೂಚನ್ ಶೆಟ್ಟಿ ಹಾಗೂ ಜೂಹಿ ಜಯಕುಮಾರ್ ಜೋಡಿಯೊಂದಿಗೆ ಕರಾವಳಿಯ ಜನಪ್ರಿಯ ಕಲಾವಿದರ ದೊಡ್ಡ ಬಳಗವೇ ಚಿತ್ರದಲ್ಲಿದೆ. ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ರಘು ಪಾಂಡೇಶ್ವರ, ನವೀನ್ ಡಿ. ಪಡೀಲ್, ರೂಪಾ ವರ್ಕಾಡಿ, ಸಿದ್ಧಿ ಪ್ರಶಾಂತ್, ಪ್ರಸಿದ್ಧ ನಾಗ್, ಶೋಭಾ ಶೆಟ್ಟಿ, ಪ್ರತಿಮಾ ನಾಯಕ್, ಕರಣ್ ಕುಂದರ್, ಅಕ್ಷತಾ ರೈ, ರಾಧಾಕೃಷ್ಣ ಕುಂಬ್ಳೆ, ಪ್ರಭಾಕರ್ ಕುಂದರ್, ರಾಮ್ ಕುಮಾರ್ ಉಪ್ಪುಂದ, ಜಯಶೀಲಾ ಮರೋಳಿ ಸೇರಿದಂತೆ ಹಲವು ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಾಂಚಜನ್ಯ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್‌ನಡಿ ಮಹೇಂದ್ರ ಶೆಟ್ಟಿ ನಿರ್ಮಿಸುತ್ತಿರುವ ‘ಗಾಡ್ ಪ್ರಾಮಿಸ್’ಗೆ ತಾಂತ್ರಿಕವಾಗಿಯೂ ಭರವಸೆಯ ತಂಡವೇ ಕೈಜೋಡಿಸಿದೆ.

ಭರತ್ ಮಧುಸೂದನ್ ಸಂಗೀತ ಸಂಯೋಜಿಸಿದ್ದು, ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ನವೀನ್ ಶೆಟ್ಟಿ ಸಂಕಲನ ಮಾಡಿದ್ದು, ಅರ್ಜುನ್ ರಾಜ್ ಸಾಹಸ ನಿರ್ದೇಶನ ನಿರ್ವಹಿಸಿದ್ದಾರೆ.

ಮೇಕಿಂಗ್ ವಿಡಿಯೊದಲ್ಲೇ ಚಿತ್ರದ ತಾಂತ್ರಿಕ ಶ್ರೀಮಂತಿಕೆಯ ಕೆಲವು ಝಲಕ್‌ಗಳು ಕಾಣಿಸಿಕೊಂಡಿದ್ದು, ಸಂಪೂರ್ಣ ಸಿನಿಮಾ ಹೇಗಿರಲಿದೆ ಎಂಬ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದು ಕಡೆ ಕರಾವಳಿಯ ಮಣ್ಣಿನ ಕಥೆ. ಮತ್ತೊಂದೆಡೆ ನಾಯಕನಾಗಿ ಮತ್ತು ನಿರ್ದೇಶಕರಾಗಿ ಹೊಸ ಜವಾಬ್ದಾರಿ ಹೊತ್ತಿರುವ ಸೂಚನ್ ಶೆಟ್ಟಿ. ಜತೆಗೆ ಜನಪ್ರಿಯ ಕಲಾವಿದರ ದೊಡ್ಡ ಬಳಗ ಹಾಗೂ ಅನುಭವಿ ತಾಂತ್ರಿಕ ತಂಡ. ಹೀಗಾಗಿ ‘ಗಾಡ್ ಪ್ರಾಮಿಸ್’ ಸುತ್ತ ನಿರೀಕ್ಷೆ ಸಹಜವಾಗಿಯೇ ಮೂಡಿದೆ.