ಮೆನೊಪಾಸ್‌: ಹೆಣ್ಣಿನ ಬದುಕಿನ ಹೊಸ ಅಧ್ಯಾಯ; ಆರೋಗ್ಯದ ಕಾಳಜಿ ಇರಲಿ

ಮೆನೊಪಾಸ್‌: ಹೆಣ್ಣಿನ ಬದುಕಿನ ಹೊಸ ಅಧ್ಯಾಯ; ಆರೋಗ್ಯದ ಕಾಳಜಿ ಇರಲಿ

ಮಹಿಳೆಯ ಬದುಕಿನಲ್ಲಿ ಬಾಲ್ಯದಿಂದ ಯೌವನ, ತಾಯ್ತನದವರೆಗೆ ದೇಹ ಹಲವು ಹಂತಗಳನ್ನು ದಾಟುತ್ತದೆ. ಅದೇ ರೀತಿ ಒಂದು ಹಂತದಲ್ಲಿ ಮುಟ್ಟಿನ ಅವಧಿ ಶಾಶ್ವತವಾಗಿ ಅಂತ್ಯಗೊಳ್ಳುತ್ತದೆ. ಇದೇ ಋತುಬಂಧ ಅಥವಾ ಮೆನೊಪಾಸ್‌. ಇದು ಕಾಯಿಲೆಯಲ್ಲ; ಮಹಿಳೆಯ ಜೀವನದಲ್ಲಿ ಸಹಜವಾಗಿ ಸಂಭವಿಸುವ ಜೈವಿಕ ಬದಲಾವಣೆ. ಆದರೆ ಈ ಹಂತದಲ್ಲಿ ದೇಹದಲ್ಲಿ ಉಂಟಾಗುವ ಹಾರ್ಮೋನಲ್‌ ಬದಲಾವಣೆಗಳು ಹಲವು ರೀತಿಯ ದೈಹಿಕ ಹಾಗೂ ಮಾನಸಿಕ ಲಕ್ಷಣಗಳಿಗೆ ಕಾರಣವಾಗಬಹುದು.

ಸಾಮಾನ್ಯವಾಗಿ 45ರಿಂದ 55 ವರ್ಷಗಳ ನಡುವಿನ ಅವಧಿಯಲ್ಲಿ ಋತುಬಂಧ ಸಂಭವಿಸುತ್ತದೆ. ಸತತ 12 ತಿಂಗಳ ಕಾಲ ಮುಟ್ಟು ಆಗದೇ ಇದ್ದಾಗ ಮಹಿಳೆ ಋತುಬಂಧವನ್ನು ತಲುಪಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಂಡಾಶಯಗಳ ಕಾರ್ಯಚಟುವಟಿಕೆ ಕ್ರಮೇಣ ಕಡಿಮೆಯಾಗುವುದರೊಂದಿಗೆ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್‌ಗಳ ಮಟ್ಟವೂ ಇಳಿಕೆಯಾಗುತ್ತದೆ.

ಋತುಬಂಧ ಎನ್ನುವುದು ಒಂದೇ ದಿನದಲ್ಲಿ ಸಂಭವಿಸುವ ಬದಲಾವಣೆಯಲ್ಲ. ಅದಕ್ಕೂ ಮುನ್ನವೇ ದೇಹದಲ್ಲಿ ಹಲವು ಬದಲಾವಣೆಗಳು ಆರಂಭವಾಗುತ್ತವೆ. ಈ ಅವಧಿಯನ್ನು ಪೆರಿಮೆನೊಪಾಸ್‌ ಎಂದು ಕರೆಯಲಾಗುತ್ತದೆ. ಮುಟ್ಟು ಸರಿಯಾದ ಸಮಯಕ್ಕೆ ಆಗದಿರುವುದು, ಹೆಚ್ಚು ಅಥವಾ ಕಡಿಮೆ ರಕ್ತಸ್ರಾವವಾಗುವುದು ಸೇರಿದಂತೆ ಮುಟ್ಟಿನ ಕ್ರಮದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು.

ಈ ಹಂತದಲ್ಲಿ ಹಾರ್ಮೋನ್‌ಗಳ ಏರಿಳಿತದಿಂದಾಗಿ ಕೆಲ ಮಹಿಳೆಯರಿಗೆ ದೇಹದಲ್ಲಿ ಇದ್ದಕ್ಕಿದ್ದಂತೆ ಬಿಸಿಯಾಗುವ ಅನುಭವ, ಮುಖದಲ್ಲಿ ಉಷ್ಣತೆ, ರಾತ್ರಿ ವೇಳೆ ಅತಿಯಾಗಿ ಬೆವರುವುದು ಹಾಗೂ ನಿದ್ರೆಯ ಸಮಸ್ಯೆ ಕಾಡಬಹುದು.

ಋತುಬಂಧದ ಪರಿಣಾಮ ದೇಹಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಹಾರ್ಮೋನ್‌ಗಳ ಬದಲಾವಣೆಯಿಂದ ಮನಸ್ಥಿತಿಯಲ್ಲೂ ಏರುಪೇರು ಕಾಣಿಸಿಕೊಳ್ಳಬಹುದು. ಕಿರಿಕಿರಿ, ಆತಂಕ, ಮನಸ್ಸಿನಲ್ಲಿ ಅಸ್ಥಿರತೆ, ಬೇಸರ ಅಥವಾ ಖಿನ್ನತೆಯ ಭಾವನೆ ಕೆಲವರಲ್ಲಿ ಕಾಣಿಸಿಕೊಳ್ಳಬಹುದು. ನಿದ್ರೆಯ ಕೊರತೆ ಈ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಬಹುದು.

ಆದ್ದರಿಂದ ಋತುಬಂಧದ ಅವಧಿಯಲ್ಲಿ ಮಹಿಳೆಯರು ಅನುಭವಿಸುವ ಬದಲಾವಣೆಗಳನ್ನು ಕುಟುಂಬದ ಸದಸ್ಯರು ಅರ್ಥಮಾಡಿಕೊಂಡು, ಅಗತ್ಯವಾದ ಭಾವನಾತ್ಮಕ ಬೆಂಬಲ ನೀಡುವುದು ಕೂಡ ಮುಖ್ಯ.

ಈಸ್ಟ್ರೊಜೆನ್‌ ಪ್ರಮಾಣ ಕಡಿಮೆಯಾಗುವುದರಿಂದ ಯೋನಿ ಶುಷ್ಕತೆ, ದೈಹಿಕ ಸಂಬಂಧದ ವೇಳೆ ನೋವು, ಮೂತ್ರದ ಸೋಂಕು ಅಥವಾ ಮೂತ್ರ ನಿಯಂತ್ರಣದಲ್ಲಿ ತೊಂದರೆ ಉಂಟಾಗಬಹುದು. ಚರ್ಮ ಮತ್ತು ಕೂದಲು ಒಣಗುವುದು, ದೇಹದ ತೂಕದಲ್ಲಿ ಬದಲಾವಣೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಋತುಬಂಧದ ನಂತರದ ಅವಧಿಯಲ್ಲಿ ಮೂಳೆಯ ಸಾಂದ್ರತೆ ಕಡಿಮೆಯಾಗುವ ಅಪಾಯ ಹೆಚ್ಚಾಗುವುದರಿಂದ ಆಸ್ಟಿಯೋಪೊರೋಸಿಸ್‌ ಬಗ್ಗೆ ವಿಶೇಷ ಗಮನ ಅಗತ್ಯ. ಮೂಳೆಗಳು ದುರ್ಬಲಗೊಂಡರೆ ಸಣ್ಣ ಪ್ರಮಾಣದ ಬಿದ್ದಾಟಕ್ಕೂ ಮುರಿತ ಉಂಟಾಗುವ ಸಾಧ್ಯತೆ ಹೆಚ್ಚಬಹುದು. ಹೃದಯದ ಆರೋಗ್ಯದ ಮೇಲೂ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.

ಈ ಅವಧಿಯಲ್ಲಿ ಪೌಷ್ಟಿಕ ಹಾಗೂ ಸಮತೋಲಿತ ಆಹಾರ ಸೇವನೆ ಅತ್ಯಂತ ಮುಖ್ಯ. ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಹೊಂದಿರುವ ಆಹಾರಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಮೂಳೆಯ ಆರೋಗ್ಯಕ್ಕೆ ಸಹಕಾರಿ. ಹಣ್ಣು, ತರಕಾರಿ, ಧಾನ್ಯಗಳು, ಪ್ರೋಟೀನ್‌ಯುಕ್ತ ಆಹಾರ ಸೇರಿದಂತೆ ವೈವಿಧ್ಯಮಯ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು.

ನಿಯಮಿತ ದೈಹಿಕ ಚಟುವಟಿಕೆ ಋತುಬಂಧದ ಅವಧಿಯಲ್ಲಿ ಹಲವು ರೀತಿಯಲ್ಲಿ ನೆರವಾಗುತ್ತದೆ. ಪ್ರತಿದಿನದ ನಡಿಗೆ, ಯೋಗ, ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ ಹಾಗೂ ತೂಕವನ್ನು ಬಳಸಿಕೊಂಡು ಮಾಡುವ ವ್ಯಾಯಾಮಗಳು ಮೂಳೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತವೆ. ಜೊತೆಗೆ ಉತ್ತಮ ನಿದ್ರೆ ಹಾಗೂ ಒತ್ತಡ ನಿರ್ವಹಣೆಯತ್ತಲೂ ಗಮನ ಹರಿಸಬೇಕು.

ಋತುಬಂಧದ ಲಕ್ಷಣಗಳು ಪ್ರತಿಯೊಬ್ಬ ಮಹಿಳೆಯಲ್ಲೂ ಒಂದೇ ರೀತಿಯಾಗಿರುವುದಿಲ್ಲ. ಕೆಲವರಿಗೆ ಸಣ್ಣ ಪ್ರಮಾಣದ ಬದಲಾವಣೆಗಳು ಮಾತ್ರ ಕಂಡುಬಂದರೆ, ಇನ್ನು ಕೆಲವರಿಗೆ ದೈನಂದಿನ ಜೀವನದ ಮೇಲೆಯೇ ಪರಿಣಾಮ ಬೀರುವಷ್ಟು ತೊಂದರೆ ಉಂಟಾಗಬಹುದು.

ಲಕ್ಷಣಗಳು ತೀವ್ರವಾಗಿದ್ದರೆ ಸ್ವಯಂ ಔಷಧಿ ಸೇವಿಸುವ ಬದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಅಗತ್ಯವಿದ್ದಲ್ಲಿ ವೈದ್ಯರು ಹಾರ್ಮೋನ್‌ ರಿಪ್ಲೇಸ್‌ಮೆಂಟ್‌ ಥೆರಪಿ (HRT) ಸೇರಿದಂತೆ ಸೂಕ್ತ ಚಿಕಿತ್ಸಾ ಆಯ್ಕೆಗಳನ್ನು ಪರಿಗಣಿಸಬಹುದು. ಯಾವ ಚಿಕಿತ್ಸೆ ಸೂಕ್ತ ಎಂಬುದನ್ನು ಮಹಿಳೆಯ ವಯಸ್ಸು, ಆರೋಗ್ಯ ಸ್ಥಿತಿ ಮತ್ತು ಲಕ್ಷಣಗಳನ್ನು ಆಧರಿಸಿ ವೈದ್ಯರೇ ನಿರ್ಧರಿಸಬೇಕು.

ಋತುಬಂಧ ಎಂದರೆ ಮಹಿಳೆಯ ಆರೋಗ್ಯ ಅಥವಾ ಚೈತನ್ಯಕ್ಕೆ ತೆರೆ ಬೀಳುವುದು ಎಂದರ್ಥವಲ್ಲ. ಬದಲಾಗಿ ಜೀವನದ ಮತ್ತೊಂದು ಹೊಸ ಅಧ್ಯಾಯಕ್ಕೆ ಕಾಲಿಡುವ ಸಹಜ ಹಂತ. ದೇಹದಲ್ಲಾಗುವ ಬದಲಾವಣೆಗಳನ್ನು ಅರ್ಥಮಾಡಿಕೊಂಡು, ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಮತ್ತು ಅಗತ್ಯವಿದ್ದಾಗ ವೈದ್ಯಕೀಯ ಸಲಹೆ ಪಡೆಯುವ ಮೂಲಕ ಈ ಹಂತವನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು.