ರಿಯಲ್ ಎಸ್ಟೇಟ್ ವ್ಯವಹಾರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿ, ಬಳಿಕ ಹಣ ಕೇಳಿದ ವ್ಯಕ್ತಿಯನ್ನು ಬ್ಲ್ಯಾಕ್ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ ಆರೋಪದಡಿ ಮಹಿಳೆಯೊಬ್ಬರನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಡುಬಿದ್ರೆಯ ಕಂಚಿನಡ್ಕ ನಿವಾಸಿ ಜೀನತ್ ಇಬ್ರಾಹಿಂ ಬಂಧಿತ ಮಹಿಳೆ. ಉಡುಪಿ ಮೂಲದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿತೆಯನ್ನು ವಶಕ್ಕೆ ಪಡೆದಿದ್ದಾರೆ.
ದೂರುದಾರರು ಮತ್ತು ಮಹಿಳೆ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ನಡೆಸುತ್ತಿದ್ದರು. ಈ ವೇಳೆ ಹೂಡಿಕೆ ಉದ್ದೇಶದಿಂದ ದೂರುದಾರರು ಮಹಿಳೆಗೆ 70 ಲಕ್ಷ ರೂ. ನೀಡಿದ್ದರು. ಆದರೆ, ಆ ಹಣವನ್ನು ಜಮೀನು ಖರೀದಿಗೆ ಬಳಸದೇ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚನೆ ಎಸಗಿರುವುದಾಗಿ ಆರೋಪಿಸಲಾಗಿದೆ.
ಇದಲ್ಲದೆ, ಕಚೇರಿ ಮುಚ್ಚುವ ಸಂದರ್ಭದಲ್ಲಿ ಕೆಲವು ದಾಖಲೆಗಳು ಹಾಗೂ ಪೆನ್ಡ್ರೈವ್ ಪತ್ತೆಯಾಗಿದ್ದು, ಅದರಲ್ಲಿ ಹಲವರ ಖಾಸಗಿ ಹಾಗೂ ಅಶ್ಲೀಲ ಫೋಟೋ ಮತ್ತು ವಿಡಿಯೋಗಳಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಹಣ ವಾಪಸ್ ನೀಡುವಂತೆ ಕೇಳಿದಾಗ, ಮಹಿಳೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ, ಖಾಸಗಿ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಹಾಗೂ ದೂರುದಾರ ಮತ್ತು ಅವರ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ ನಿರಂತರವಾಗಿ ಬ್ಲ್ಯಾಕ್ಮೇಲ್ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ಕೃತ್ಯದಲ್ಲಿ ಸಬೀನಾ ಇಲಿಯಾಸ್ ಸೇರಿದಂತೆ ಇತರರೂ ಭಾಗಿಯಾಗಿದ್ದು, ಅಕ್ರಮವಾಗಿ ಹಣ ವಸೂಲಿ ಮಾಡುವ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಉಡುಪಿ ನಗರ ಠಾಣೆ ಪೊಲೀಸರು, ಪ್ರಭಾರ ಎಸ್ಐ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಹಾಗೂ ಪಿಎಸ್ಐ ಭರತೇಶ್ ಕಂಕಣವಾಡಿ ನೇತೃತ್ವದ ವಿಶೇಷ ತಂಡದ ಮೂಲಕ ಮಹಿಳೆಯನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೆಚ್ಚಿನ ತನಿಖೆಗಾಗಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ಮೋಸ ಅಥವಾ ಬ್ಲ್ಯಾಕ್ಮೇಲ್ಗೆ ಒಳಗಾಗಿರುವವರು ಇದ್ದರೆ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
