ಚಾಲಕನ ನಿಯಂತ್ರಣ ತಪ್ಪಿದ ಈಚರ್ ಲಾರಿಯೊಂದು ರಸ್ತೆ ಬದಿಯ ಟ್ರಾನ್ಸ್ಫಾರ್ಮರ್ ಕಂಬ ಹಾಗೂ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಬಳಿಕ ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ಶನಿವಾರ ರಾತ್ರಿ ಉಡುಪಿ ನಗರದ ಪೆರಂಪಳ್ಳಿ ಮೀನು ಮಾರುಕಟ್ಟೆ ಸಮೀಪ ನಡೆದಿದೆ.
ಮಣಿಪಾಲದಿಂದ ಪೆರಂಪಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿಯು ರಾತ್ರಿ ಸುಮಾರು 9 ಗಂಟೆ ವೇಳೆಗೆ ನಿಯಂತ್ರಣ ತಪ್ಪಿ ಮೊದಲು ಟ್ರಾನ್ಸ್ಫಾರ್ಮರ್ ಕಂಬಕ್ಕೆ, ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಲಾರಿ ರವಿ ಪೂಜಾರಿ ಅವರಿಗೆ ಸೇರಿದ ಮನೆಯ ಅಂಗಳಕ್ಕೆ ನುಗ್ಗಿದೆ.
ಅಪಘಾತದ ಪರಿಣಾಮ ಮನೆಯ ಸಿಮೆಂಟ್ ಶೀಟ್ಗೆ ಹಾನಿಯಾಗಿದ್ದು, ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಚಾಲಕ ನಿದ್ರೆಗೆ ಜಾರಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ನಡೆದ ಸಮಯದಲ್ಲಿ ರಸ್ತೆಯಲ್ಲಿ ಅಥವಾ ಮನೆಯ ಅಂಗಳದಲ್ಲಿ ಯಾರೂ ಇಲ್ಲದಿದ್ದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಡಿಕ್ಕಿಯ ರಭಸಕ್ಕೆ ಟ್ರಾನ್ಸ್ಫಾರ್ಮರ್ ಕಂಬ ಮುರಿದು ಬಿದ್ದ ಪರಿಣಾಮ ಶನಿವಾರ ರಾತ್ರಿಯಿಂದ ಆ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮಾಹಿತಿ ತಿಳಿದ ತಕ್ಷಣ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾನುವಾರ ಬೆಳಿಗ್ಗೆ ಎರಡು ಕ್ರೇನ್ಗಳ ಸಹಾಯದಿಂದ ಅಪಘಾತಕ್ಕೀಡಾದ ಲಾರಿಯನ್ನು ಸ್ಥಳದಿಂದ ತೆರವುಗೊಳಿಸಲಾಯಿತು.
