ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಸುಮಾರು ₹23 ಲಕ್ಷ ಹಣ ದುರ್ಬಳಕೆ ಹಾಗೂ ವಂಚನೆ ನಡೆಸಿದ ಆರೋಪದಡಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಮತ್ತು ಆಕೆಯ ಪತಿಯನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುಗಂಧಿ ಹಾಗೂ ಆಕೆಯ ಪತಿ ಸಂತೋಷ್ ಎಂದು ಗುರುತಿಸಲಾಗಿದೆ. ಸುಗಂಧಿ ಅವರು 2023ರಿಂದ 2025ರವರೆಗೆ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸದಸ್ಯರಿಂದ ಸಂಗ್ರಹಿಸಿದ ಸಾಲ ಮರುಪಾವತಿ ಮೊತ್ತವನ್ನು ರಿಜಿಸ್ಟರ್ನಲ್ಲಿ ದಾಖಲಿಸಿ, ಬ್ಯಾಂಕ್ ಖಾತೆಗೆ ಜಮೆ ಮಾಡದೇ ದುರ್ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ.
ತನಿಖೆ ವೇಳೆ ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್ಗಳಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ನಕಲಿ ಸಹಿಗಳನ್ನು ಬಳಸಿ ಬ್ಯಾಂಕ್ನಿಂದ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಲೆಕ್ಕಪರಿಶೋಧನೆ ವೇಳೆ ಅಕ್ರಮ ಬಯಲಾಗದಂತೆ ಪ್ರತ್ಯೇಕ ಸಾಲ ಖಾತೆ ಪುಸ್ತಕಗಳನ್ನು ಸೃಷ್ಟಿಸಿ ನಿರ್ವಹಿಸಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ. ಈ ಕೃತ್ಯದಿಂದ ಒಕ್ಕೂಟಕ್ಕೆ ಸುಮಾರು ₹23 ಲಕ್ಷ ನಷ್ಟ ಉಂಟಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ನಂಬಿಕೆದ್ರೋಹ, ದಾಖಲೆ ನಕಲು ಹಾಗೂ ವಂಚನೆ ಸೇರಿದಂತೆ ವಿವಿಧ ಆರೋಪಗಳಡಿ ತನಿಖೆ ಮುಂದುವರಿದಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನ ಮತ್ತು ಹಿರಿಯಡಕ ವೃತ್ತ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ ಪುನೀತ್ ಕುಮಾರ್ ಬಿ.ಇ. ಹಾಗೂ ತನಿಖಾಧಿಕಾರಿ ಪಿಎಸ್ಐ ವಿಠ್ಠಲ ಮಲವಡಕರ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದೆ.
ಪ್ರಾಥಮಿಕ ತನಿಖೆಯಲ್ಲಿ ಸುಗಂಧಿ ಹಾಗೂ ಸಂತೋಷ್ ವಿವಿಧ ಸದಸ್ಯರ ಹೆಸರಿನಲ್ಲಿ ನಕಲಿ ಸಹಿ ಮತ್ತು ದಾಖಲೆಗಳನ್ನು ಸೃಷ್ಟಿಸಿರುವುದು ಕಂಡುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆಯನ್ನು ಹಿರಿಯಡಕ ಪೊಲೀಸರು ಮುಂದುವರಿಸಿದ್ದಾರೆ.
