ಕಿನ್ನಿಮುಲ್ಕಿ ಗಣೇಶನ ಅದ್ದೂರಿ ವಿಸರ್ಜನಾ ಶೋಭಾಯಾತ್ರೆ

ಕಿನ್ನಿಮುಲ್ಕಿ ಗಣೇಶನ ಅದ್ದೂರಿ ವಿಸರ್ಜನಾ ಶೋಭಾಯಾತ್ರೆ

ಉಡುಪಿ: ಕಿನ್ನಿಮೂಲ್ಕಿಯ ಗಣಪತಿ ಕಟ್ಟೆಯಲ್ಲಿ ಕಳೆದ ಹತ್ತು ದಿನಗಳಿಂದ ಕೃಷ್ಣಮೂರ್ತಿ ಆಚಾರ್ಯ ಅವರ ನೇತೃತ್ವದಲ್ಲಿ ಭಕ್ತಿಭಾವದಿಂದ ಪೂಜಿಸಲ್ಪಟ್ಟ ಗಣೇಶನಿಗೆ ಬುಧವಾರ ರಾತ್ರಿ ಭಾವಪೂರ್ಣ ವಿದಾಯ ನೀಡಲಾಯಿತು. ಭಕ್ತಿ, ಸಂಭ್ರಮ ಹಾಗೂ ವೈಭವದ ಸಮ್ಮಿಲನದೊಂದಿಗೆ ನಡೆದ ವಿಸರ್ಜನಾ ಶೋಭಾಯಾತ್ರೆ ಸಾವಿರಾರು ಭಕ್ತರ ಮನಸೂರೆಗೊಂಡಿತು.

ರಾತ್ರಿ ಸುಮಾರು 7ರಿಂದ 7.30ರ ವೇಳೆಗೆ ಗಣೇಶನಿಗೆ ಮಹಾಮಂಗಳಾರತಿ ನೆರವೇರಿಸಿದ ಬಳಿಕ, ವಿಶೇಷವಾಗಿ ಅಲಂಕರಿಸಲಾಗಿದ್ದ ವಾಹನದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಮೊಳಗಿದ ‘ಗಣಪತಿ ಬಪ್ಪಾ ಮೋರೆಯಾ’ ಘೋಷಣೆಗಳು ವಾತಾವರಣವನ್ನು ಭಕ್ತಿಮಯಗೊಳಿಸಿದವು.

ಕನ್ನರ್ಪಾಡಿಯಿಂದ ಫಯರ್‌ಸ್ಟೇಷನ್ ರಸ್ತೆ, ಬ್ರಹ್ಮಗಿರಿ ವೃತ್ತ, ಜೋಡುಕಟ್ಟೆ–ಕಿನ್ನಿಮೂಲ್ಕಿ ಮುಖ್ಯರಸ್ತೆ, ಬಲಾಯಿಪಾದೆ ಹಾಗೂ ಸ್ವಾಗತ ಗೋಪುರ ಮಾರ್ಗವಾಗಿ ಮೆರವಣಿಗೆ ಸಾಗಿತು. ವಿವಿಧ ಜಂಕ್ಷನ್‌ಗಳಲ್ಲಿ ಕೆಲಹೊತ್ತು ಕ್ರೇನ್‌ ಮೂಲಕ ಕೃಷ್ಣಮೂರ್ತಿ ಆಚಾರ್ಯ ಅವರು ಗಣೇಶನ ವಿಗ್ರಹಕ್ಕೆ ಪುಷ್ಪವೃಷ್ಟಿ ನೆರವೇರಿಸಿ ಭಕ್ತಿಭಾವ ಮೆರೆದರು.

ಶ್ರೀರಾಮ, ಅಯ್ಯಪ್ಪ, ಹನುಮಾನ್ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಶಯಗಳನ್ನು ಬಿಂಬಿಸುವ ಕಲಾಕೃತಿಗಳು ಮತ್ತು ಆಕರ್ಷಕ ಟ್ಯಾಬ್ಲೋಗಳು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದವು. ಡಿಜೆ ಹಾಗೂ ವಿವಿಧ ವಾದ್ಯಗಳ ನಾದಕ್ಕೆ ಯುವಕ-ಯುವತಿಯರು ಉತ್ಸಾಹದಿಂದ ಹೆಜ್ಜೆ ಹಾಕಿದರೆ, ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಗಣೇಶನ ವೈಭವವನ್ನು ಕಣ್ತುಂಬಿಕೊಂಡರು.

ಹತ್ತು ದಿನಗಳ ಕಾಲ ತಮ್ಮ ಮನೆಮನೆಯ ದೇವರಂತೆ ಆರಾಧಿಸಿದ ಗಣೇಶನಿಗೆ ಅಂತಿಮ ವಿದಾಯ ನೀಡುವ ಕ್ಷಣ ಭಕ್ತರಿಗೆ ಭಾವುಕತೆಯನ್ನು ಮೂಡಿಸಿತು. ‘ಮುಂದಿನ ವರ್ಷ ಬೇಗ ಬಾ’ ಎಂಬ ಹಾರೈಕೆಯೊಂದಿಗೆ ಭಕ್ತರು ಬಪ್ಪನಿಗೆ ಬೀಳ್ಕೊಟ್ಟರು.

ಮಧ್ಯರಾತ್ರಿ ಸುಮಾರು 12.12ರ ವೇಳೆಗೆ ಕನ್ನರ್ಪಾಡಿಯ ಶ್ರೀ ಜಯದುರ್ಗಾಪರಮೇಶ್ವರಿ ದೇವಳದ ಕಣ್ವ ಪುಷ್ಕರಣಿಯಲ್ಲಿ ಗಣೇಶನ ವಿಗ್ರಹವನ್ನು ಜಲಸ್ತಂಭನಗೊಳಿಸುವ ಮೂಲಕ ವಿಸರ್ಜನಾ ವಿಧಿ ನೆರವೇರಿತು.