5 ವರ್ಷದ ಬಳಿಕ ವಿಕ್ರಂ ರವಿಚಂದ್ರನ್ ಗ್ರ್ಯಾಂಡ್ ಕಮ್‌ಬ್ಯಾಕ್:‘ಗುಚ್ಚಿ ಗರ್ಲ್’ಗೆ ಭರ್ಜರಿ ರೆಸ್ಪಾನ್ಸ್

5 ವರ್ಷದ ಬಳಿಕ ವಿಕ್ರಂ ರವಿಚಂದ್ರನ್ ಗ್ರ್ಯಾಂಡ್ ಕಮ್‌ಬ್ಯಾಕ್:‘ಗುಚ್ಚಿ ಗರ್ಲ್’ಗೆ ಭರ್ಜರಿ ರೆಸ್ಪಾನ್ಸ್

ನಟ ವಿಕ್ರಂ ರವಿಚಂದ್ರನ್ ಸುದೀರ್ಘ ಐದು ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ತಮ್ಮ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ತಮ್ಮ ಬಹುನಿರೀಕ್ಷಿತ ಸಿನಿಮಾ ‘ಮುಧೋಳ್’ ಚಿತ್ರದ ಮೊದಲ ಹಾಡು ‘ಗುಚ್ಚಿ ಗರ್ಲ್’ ಅನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಹಾಡು ಬಿಡುಗಡೆಯೊಂದಿಗೆ ‘ಮುಧೋಳ್’ ಸಿನಿಮಾದ ಮೇಲಿನ ಕುತೂಹಲವೂ ಹೆಚ್ಚಾಗಿದೆ.

ಸ್ಯಾಂಡಲ್‌ವುಡ್‌ನ ಶೋಮ್ಯಾನ್ ಖ್ಯಾತಿಯ ನಿರ್ದೇಶಕ ಪ್ರೇಮ್ ‘ಗುಚ್ಚಿ ಗರ್ಲ್’ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರೇಮ್, ತಮ್ಮ ಬಾಸ್ ರವಿಚಂದ್ರನ್ ಅವರ ಪುತ್ರನ ಸಿನಿಮಾದ ಹಾಡನ್ನು ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು. ಅಲ್ಲದೆ, ‘ಮುಧೋಳ್’ ಚಿತ್ರದ ಮುಂದಿನ ಪ್ರತಿಯೊಂದು ಬೆಳವಣಿಗೆಯಲ್ಲೂ ಚಿತ್ರತಂಡದ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

‘ಮುಧೋಳ್’ ಸಿನಿಮಾ ಪಕ್ಕಾ ಕಮರ್ಷಿಯಲ್ ಹಾಗೂ ಸಸ್ಪೆನ್ಸ್ ಓರಿಯೆಂಟೆಡ್ ಶೈಲಿಯಲ್ಲಿ ಮೂಡಿಬಂದಿದೆ ಎಂದು ವಿಕ್ರಂ ರವಿಚಂದ್ರನ್ ಮಾಹಿತಿ ನೀಡಿದ್ದಾರೆ. ‘ಗುಚ್ಚಿ ಗರ್ಲ್’ ಹಾಡಿನಲ್ಲಿ ನಾಯಕಿಯರಾದ ಸಂಜನಾ ಆನಂದ್ ಹಾಗೂ ಬಾಲಿವುಡ್ ನಟಿ ಇಷಿತಾ ರಾಜ್ ಗಮನ ಸೆಳೆಯುವಂತೆ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ವಿಕ್ರಂ ಕೂಡ ಒಂದೆರಡು ಸ್ಟೆಪ್ ಹಾಕಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಂಪೂರ್ಣ ಮಾರ್ಗದರ್ಶನ ಮತ್ತು ಸಲಹೆ ಇರುವುದೇ ವಿಶೇಷ. ಅಷ್ಟೇ ಅಲ್ಲ, ‘ಮುಧೋಳ್’ ಎಂಬ ವಿಭಿನ್ನ ಶೀರ್ಷಿಕೆಯನ್ನು ಆಯ್ಕೆ ಮಾಡಿದ್ದೂ ಸ್ವತಃ ರವಿಚಂದ್ರನ್ ಅವರೇ ಎನ್ನಲಾಗಿದೆ. ಹೀಗಾಗಿ ತಂದೆಯ ಮಾರ್ಗದರ್ಶನದಲ್ಲಿ ವಿಕ್ರಂ ಅವರ ಈ ಕಮ್‌ಬ್ಯಾಕ್ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ನಟನೆಯ ಜೊತೆಗೆ ವಿಕ್ರಂ ರವಿಚಂದ್ರನ್ ನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಕಲೆ ಮಾತ್ರವಲ್ಲದೆ ವ್ಯವಹಾರಿಕ ದೃಷ್ಟಿಕೋನವೂ ಮುಖ್ಯ. ನಿರ್ಮಾಪಕರು ಹೂಡಿಕೆ ಮಾಡಿದ ಹಣಕ್ಕೆ ತಕ್ಕಂತೆ ಬಿಸಿನೆಸ್ ತಂದುಕೊಡುವ ಜವಾಬ್ದಾರಿ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಮೇಲೂ ಇದೆ ಎಂಬ ತಮ್ಮ ಅಭಿಪ್ರಾಯವನ್ನು ವಿಕ್ರಂ ಹಂಚಿಕೊಂಡಿದ್ದಾರೆ.

ವಿಜಯ್ ಟಾಟಾ ಮತ್ತು ಅಮೃತ ಟಾಟಾ ನಿರ್ಮಾಣದ ‘ಮುಧೋಳ್’ ಚಿತ್ರಕ್ಕೆ ಕಾರ್ತಿಕ್ ರಂಜನ್ ನಿರ್ದೇಶನವಿದೆ. ವಿಕ್ರಂ ರವಿಚಂದ್ರನ್ ನಾಯಕನಾಗಿ ನಟಿಸಿದ್ದು, ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಭಿಲಾಷ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಸದ್ಯ ‘ಗುಚ್ಚಿ ಗರ್ಲ್’ ಮೂಲಕ ಸದ್ದು ಮಾಡಿರುವ ‘ಮುಧೋಳ್’ ಚಿತ್ರದ ಮುಂದಿನ ಅಪ್ಡೇಟ್ ಹಾಗೂ ಅಧಿಕೃತ ರಿಲೀಸ್ ದಿನಾಂಕಕ್ಕಾಗಿ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.