“ತೂಗುಸೇತುವೆಗಳ ಸರದಾರ” ಡಾ. ಗಿರೀಶ್ ಭಾರದ್ವಾಜ್ ನಿಧನ

“ತೂಗುಸೇತುವೆಗಳ ಸರದಾರ” ಡಾ. ಗಿರೀಶ್ ಭಾರದ್ವಾಜ್ ನಿಧನ

ತೂಗುಸೇತುವೆಗಳ ನಿರ್ಮಾಣ ಕ್ಷೇತ್ರದಲ್ಲಿ ದೇಶ-ವಿದೇಶಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ, ಪದ್ಮಶ್ರೀ ಪುರಸ್ಕೃತ ಹಾಗೂ “ತೂಗುಸೇತುವೆಗಳ ಸರದಾರ” ಎಂದೇ ಖ್ಯಾತರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಡಾ. ಗಿರೀಶ್ ಭಾರದ್ವಾಜ್ ಅವರು ಮಂಗಳವಾರ ಮುಂಜಾನೆ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಹೃದಯ ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದರು.

ಇಂಜಿನಿಯರಿಂಗ್ ಪದವಿ ಪಡೆದ ಬಳಿಕ “ಆಯಶಿಲ್ಪ ಇಂಜಿನಿಯರಿಂಗ್ ವರ್ಕ್ಸ್” ಸ್ಥಾಪಿಸಿದ್ದ ಡಾ. ಭಾರದ್ವಾಜ್ ಅವರು, ನಂತರ ತೂಗುಸೇತುವೆಗಳ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನೇ ಬರೆದರು. ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಗಳಲ್ಲಿಯೂ 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿ ಅಪಾರ ಜನಮನ್ನಣೆ ಗಳಿಸಿದ್ದರು. ಈ ಸಾಧನೆಗಾಗಿ ಅವರಿಗೆ “ತೂಗುಸೇತುವೆಗಳ ಸರದಾರ” ಎಂಬ ಬಿರುದು ಲಭಿಸಿತ್ತು.

ಸಮಾಜಮುಖಿ ಹಾಗೂ ವಿನೂತನ ಇಂಜಿನಿಯರಿಂಗ್ ಸಾಧನೆಯನ್ನು ಪರಿಗಣಿಸಿ ಭಾರತ ಸರ್ಕಾರವು 2017ರಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದಿಂದ ಇಂಜಿನಿಯರಿಂಗ್ ಕ್ಷೇತ್ರಕ್ಕೆ, ವಿಶೇಷವಾಗಿ ತೂಗುಸೇತುವೆ ನಿರ್ಮಾಣ ವಲಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಅವರು ಪುತ್ರರಾದ ಸುದರ್ಶನ್ ಮತ್ತು ಪತಂಜಲಿ, ಪುತ್ರಿ ರಷ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅವರ ಪತ್ನಿ ಉಷಾ ಅವರು ಈ ಹಿಂದೆ ನಿಧನರಾಗಿದ್ದರು.