ಉಡುಪಿ ಜಿಲ್ಲೆಯಲ್ಲಿ ವಶಪಡಿಸಿಕೊಂಡಿದ್ದ 36.29 ಲಕ್ಷ ರೂ. ಮೌಲ್ಯದ 73 ಕೆಜಿ ಗಾಂಜಾ ನಾಶ

ಉಡುಪಿ ಜಿಲ್ಲೆಯಲ್ಲಿ ವಶಪಡಿಸಿಕೊಂಡಿದ್ದ 36.29 ಲಕ್ಷ ರೂ. ಮೌಲ್ಯದ 73 ಕೆಜಿ ಗಾಂಜಾ ನಾಶ

ಮಾದಕ ವಸ್ತುಗಳ ಅಕ್ರಮ ಸಾಗಣೆ ಹಾಗೂ ಮಾರಾಟದ ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮದ ಭಾಗವಾಗಿ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 73 ಕೆಜಿ 92 ಗ್ರಾಂ 828 ಮಿಲಿಗ್ರಾಂ ತೂಕದ, ಅಂದಾಜು 36,29,550 ರೂ. ಮೌಲ್ಯದ ಗಾಂಜಾವನ್ನು ಕಾನೂನುಬದ್ಧವಾಗಿ ನಾಶಪಡಿಸಲಾಯಿತು.

ಜಿಲ್ಲಾ ಡ್ರಗ್ ಡಿಸ್‌ಪೋಸಲ್ ಕಮಿಟಿಯ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪಡುಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಮೆ. ಆಯುಷ್ ಎನ್‌ವಿರೋಟೆಕ್ ಪ್ರೈ.ಲಿ. ಸಂಸ್ಥೆಯಲ್ಲಿ ಪರಿಸರ ಸ್ನೇಹಿ ಹಾಗೂ ಸರ್ಕಾರದ ನಿಯಮಾವಳಿಗಳಿಗೆ ಅನುಗುಣವಾಗಿ ಗಾಂಜಾವನ್ನು ವಿಲೇವಾರಿ ಮಾಡಲಾಯಿತು.

ಈ ಕಾರ್ಯಾಚರಣೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್‌ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಮ್ ಶಂಕರ್ ನೇತೃತ್ವ ವಹಿಸಿದ್ದರು. ನ್ಯಾಯಾಲಯದ ನಿರ್ದೇಶನ ಹಾಗೂ ಜಾರಿಯಲ್ಲಿರುವ ಕಾನೂನು ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಪರಿಶೀಲನೆಯ ನಂತರವೇ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಡ್ರಗ್ ಡಿಸ್‌ಪೋಸಲ್ ಕಮಿಟಿಯ ಸದಸ್ಯರು ಹಾಗೂ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯಪ್ರಸಾದ್, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು., ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳು ಮತ್ತು ಮೆ. ಆಯುಷ್ ಎನ್‌ವಿರೋಟೆಕ್ ಪ್ರೈ.ಲಿ. ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದು, ಗಾಂಜಾ ನಾಶಪಡಿಸುವ ಸಂಪೂರ್ಣ ಪ್ರಕ್ರಿಯೆಗೆ ಸಾಕ್ಷಿಯಾದರು.

ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೂ ಆದ್ಯತೆ ನೀಡುತ್ತಿದ್ದು, ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಈ ರೀತಿಯ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಮುಂದುವರಿಯಲಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.