ಆರೋಗ್ಯ ಕ್ಷೇತ್ರದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಅತ್ಯಂತ ಸಂಕೀರ್ಣ ಮತ್ತು ಅಪರೂಪದ ಶ್ವಾಸನಾಳ ಕ್ಯಾನ್ಸರ್‌ಗೆ ಸಂಬಂಧಿಸಿದ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಕಡಿಮೆ ನೋವು, ವೇಗವಾದ ಚೇತರಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ನಡೆದ ಈ ಶಸ್ತ್ರಚಿಕಿತ್ಸೆ ಇದೀಗ ರಾಜ್ಯದ ಗಮನ ಸೆಳೆದಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 36 ವರ್ಷದ ವ್ಯಕ್ತಿಯ ಶ್ವಾಸನಾಳದ ಕೆಳಭಾಗದಲ್ಲಿ ಕ್ಯಾನ್ಸರ್ ಗೆಡ್ಡೆ ಇರುವುದನ್ನು ಎಂಡೋಸ್ಕೋಪಿ ಪರೀಕ್ಷೆಯಲ್ಲಿ ಪತ್ತೆ ಮಾಡಲಾಗಿತ್ತು. ಈ ಹಿಂದೆ ಹೊರಗಿನ ಆಸ್ಪತ್ರೆಯಲ್ಲಿ ಗೆಡ್ಡೆಯನ್ನು ಭಾಗಶಃ ತೆಗೆದುಹಾಕಲಾಗಿದ್ದರೂ, ಉಳಿದಿದ್ದ ಗೆಡ್ಡೆ ರೋಗಿಯ ಆರೋಗ್ಯಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿತ್ತು.
ಈ ಹಿನ್ನೆಲೆಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ನವೀನ ಕುಮಾರ್ ಎ.ಎನ್. ಅವರ ನೇತೃತ್ವದ ತಜ್ಞರ ತಂಡ ಅತ್ಯಂತ ಸಂಕೀರ್ಣವಾದ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
ರೋಬೋಟಿಕ್ ತಂತ್ರಜ್ಞಾನದ ಸಹಾಯದಿಂದ ಶ್ವಾಸನಾಳದ ಹಾನಿಗೊಳಗಾದ ಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಿ, ಆರೋಗ್ಯಕರ ಭಾಗಗಳನ್ನು ಜೋಡಿಸುವ ಮೂಲಕ ಶ್ವಾಸನಾಳವನ್ನು ಮರುನಿರ್ಮಿಸಲಾಗಿದೆ. ಶಸ್ತ್ರಚಿಕಿತ್ಸೆಯ ಅವಧಿಯಲ್ಲೇ ರೋಗಿಯ ಉಸಿರಾಟ ಮತ್ತು ಆಮ್ಲಜನಕದ ಮಟ್ಟವನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕಾಗಿದ್ದ ಕಾರಣ, ಇದು ವೈದ್ಯಕೀಯವಾಗಿ ಅತ್ಯಂತ ಸವಾಲಿನ ಕಾರ್ಯವಾಗಿತ್ತು.
ಆದರೆ ವೈದ್ಯರು, ಅರಿವಳಿಕೆ ತಜ್ಞರು ಹಾಗೂ ನರ್ಸಿಂಗ್ ಸಿಬ್ಬಂದಿಯ ಸಮನ್ವಯದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ರೋಬೋಟಿಕ್ ವಿಧಾನವು ಕಡಿಮೆ ನೋವು, ಕಡಿಮೆ ರಕ್ತಸ್ರಾವ ಮತ್ತು ವೇಗವಾದ ಚೇತರಿಕೆಯನ್ನು ಒದಗಿಸಿದ್ದು, ರೋಗಿಯನ್ನು ಕೇವಲ ನಾಲ್ಕನೇ ದಿನವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
“ರೋಬೋಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳಲ್ಲಿ ಇದು ಅತ್ಯಂತ ಸವಾಲಿನ ಕಾರ್ಯವಿಧಾನಗಳಲ್ಲಿ ಒಂದಾಗಿದೆ. ಶಸ್ತ್ರಚಿಕಿತ್ಸಾ ಹಾಗೂ ಅರಿವಳಿಕೆ ತಂಡಗಳ ನಡುವಿನ ನಿಖರ ಸಮನ್ವಯದಿಂದ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದರಿಂದ ರೋಗಿಗೆ ದೊಡ್ಡ ಛೇದನ ಮತ್ತು ದೀರ್ಘಕಾಲದ ಚೇತರಿಕೆಯ ಅಗತ್ಯ ತಪ್ಪಿದೆ.” ಎಂದು ಡಾ. ನವೀನ ಕುಮಾರ್ ಎ.ಎನ್. ತಿಳಿಸಿದ್ದಾರೆ
ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ನವಾಜ್ ಉಸ್ಮಾನ್, ಡಾ. ಅಖಿಲ್ ಪಲೋದ್, ಡಾ. ಅನಂತ್ ಬಾಲಕೃಷ್ಣನ್, ಡಾ. ಪ್ರೀತಿ ಹಾಗೂ ಅರಿವಳಿಕೆ ವಿಭಾಗದ ಡಾ. ಅನಿತಾ ಎನ್. ಮತ್ತು ಡಾ. ಶ್ರೇಯಾ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಸಾಧನೆ ಕುರಿತು ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಸಂತಸ ವ್ಯಕ್ತಪಡಿಸಿದ್ದು, ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ಪರಿಣತಿಯಲ್ಲಿ ಹೂಡಿಕೆ ಮುಂದುವರಿಸಿ, ಸಂಕೀರ್ಣ ರೋಬೋಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳ ಪ್ರಮುಖ ಕೇಂದ್ರವಾಗಿ ಬೆಳೆಯುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಈ ಅಪರೂಪದ ರೋಬೋಟಿಕ್ ಶ್ವಾಸನಾಳ ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಜ್ಞ ವೈದ್ಯರ ಸಮರ್ಪಣೆಯಿಂದ ಸಂಕೀರ್ಣ ಕಾಯಿಲೆಗಳಿಗೂ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ ಎಂಬುದನ್ನು ಈ ಸಾಧನೆ ಮತ್ತೊಮ್ಮೆ ಸಾಬೀತುಪಡಿಸಿದೆ.
