ಸೋನಂ ವಾಂಗ್ಚುಕ್ ಹೋರಾಟಕ್ಕೆ ಬೆಂಬಲ: ಶ್ರೀನಿವಾಸನ್ ನಂದಗೋಪಾಲ್‌ರಿಂದ 48 ಗಂಟೆಗಳ ಉಪವಾಸ ಸತ್ಯಾಗ್ರಹ

ಸೋನಂ ವಾಂಗ್ಚುಕ್ ಹೋರಾಟಕ್ಕೆ ಬೆಂಬಲ: ಶ್ರೀನಿವಾಸನ್ ನಂದಗೋಪಾಲ್‌ರಿಂದ 48 ಗಂಟೆಗಳ ಉಪವಾಸ ಸತ್ಯಾಗ್ರಹ

ಲಡಾಖ್‌ನ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಗೆ ಬೆಂಬಲ ಸೂಚಿಸಿ, ನಿವೃತ್ತ ಪತ್ರಕರ್ತ ಹಾಗೂ ಶೈಕ್ಷಣಿಕ ಕಾರ್ಯಕರ್ತ ಶ್ರೀನಿವಾಸನ್ ನಂದಗೋಪಾಲ್ ಅವರು 48 ಗಂಟೆಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಭಾನುವಾರ ಬೆಳಗ್ಗೆ ಆರಂಭವಾದ ಉಪವಾಸ ಮಂಗಳವಾರ ಬೆಳಗ್ಗೆವರೆಗೆ ಮುಂದುವರಿಯಲಿದೆ. ಸೋನಂ ವಾಂಗ್ಚುಕ್ ಸೇರಿದಂತೆ ಪ್ರತಿಭಟನಾಕಾರರು ನಡೆಸುತ್ತಿರುವ ಅನಿರ್ದಿಷ್ಟಾವಧಿಯ ಉಪವಾಸದೊಂದಿಗೆ ಐಕ್ಯತೆ ವ್ಯಕ್ತಪಡಿಸುವ ಉದ್ದೇಶದಿಂದ ಈ ಸತ್ಯಾಗ್ರಹ ಕೈಗೊಂಡಿರುವುದಾಗಿ ನಂದಗೋಪಾಲ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಜವಾಬ್ದಾರಿತನ ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಶ್ರೀನಿವಾಸನ್ ನಂದಗೋಪಾಲ್ ಅವರು ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆಯ ಸಹ-ಸಂಸ್ಥಾಪಕರಾಗಿದ್ದು, ಮಕ್ಕಳು ಹಾಗೂ ಯುವಕರಿಗಾಗಿ ಪರ್ಯಾಯ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರು ‘ಡ್ರೀಮ್ಸ್ ಆನ್ ವೀಲ್ಸ್’ ಬೈಕ್ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಸುಮಾರು 6,500 ಕಿಲೋಮೀಟರ್ ಸಂಚರಿಸಿ 5,000ಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಸಿದ್ಧತೆ ಮತ್ತು ವೃತ್ತಿ ಮಾರ್ಗದರ್ಶನ ಕುರಿತು ಸಂವಾದ ನಡೆಸಿದ್ದರು.

“ಶಿಕ್ಷಣ ಕ್ಷೇತ್ರದಲ್ಲಿ ಪರ್ಯಾಯ ವಿಧಾನಗಳಿಗಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯಾಗಿ, ಶಿಕ್ಷಣ ವ್ಯವಸ್ಥೆಯಲ್ಲಿನ ಇಂದಿನ ಪರಿಸ್ಥಿತಿ ಹಾಗೂ ಪದೇ ಪದೇ ಬೆಳಕಿಗೆ ಬರುತ್ತಿರುವ ಪರೀಕ್ಷಾ ಅಕ್ರಮಗಳು ತೀವ್ರ ಕಳವಳಕ್ಕೆ ಕಾರಣವಾಗಿವೆ. ಈಗ ಈ ಸಮಸ್ಯೆಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸಿ, ಅಗತ್ಯ ಸುಧಾರಣೆಗೆ ಮುಂದಾಗುವ ಸಮಯ ಬಂದಿದೆ,” ಎಂದು ನಂದಗೋಪಾಲ್ ತಿಳಿಸಿದ್ದಾರೆ.