ಇತಿಹಾಸ ಪ್ರಸಿದ್ಧ ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ನದಿ ಸ್ನಾನ ಘಟ್ಟವು ಹಲವು ವರ್ಷಗಳಿಂದ ನದಿ ಕೊರೆತದಿಂದ ಹಾನಿಗೊಳಗಾಗಿತ್ತು. ಪ್ರತಿವರ್ಷ ಕೃಷ್ಣಾಂಗಾರಕ ಚತುರ್ದಶಿಯ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ತೀರ್ಥಸ್ನಾನಕ್ಕಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದು, ಸೂಕ್ತ ಮೂಲಸೌಕರ್ಯದ ಕೊರತೆಯಿಂದಾಗಿ ಭಕ್ತರಿಗೆ ಸಾಕಷ್ಟು ತೊಂದರೆ ಎದುರಾಗುತ್ತಿತ್ತು.

ಮೂಡು ಪೆರಂಪಳ್ಳಿ ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ₹2.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನೂತನ ನದಿ ಸ್ನಾನ ಘಟ್ಟವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಸ್ವರ್ಣಾ ನದಿಗೆ ಬಾಗಿನ ಸಮರ್ಪಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮನವಿಯ ಮೇರೆಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ₹2.25 ಕೋಟಿ ಅನುದಾನ ಒದಗಿಸಿ ನೂತನ ನದಿ ಸ್ನಾನ ಘಟ್ಟವನ್ನು ಅಭಿವೃದ್ಧಿಪಡಿಸಲಾಗಿದೆ. ನೂತನ ಘಟ್ಟದ ನಿರ್ಮಾಣದಿಂದ ಭಕ್ತರಿಗೆ ಸುರಕ್ಷಿತ ಹಾಗೂ ಸುಸಜ್ಜಿತ ತೀರ್ಥಸ್ನಾನದ ವ್ಯವಸ್ಥೆ ಲಭ್ಯವಾಗುವುದರ ಜೊತೆಗೆ ನದಿ ತೀರದ ಸುರಕ್ಷತೆಯೂ ಹೆಚ್ಚಲಿದೆ.
ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, “ಉಡುಪಿಯ ಜೀವನಾಡಿಯಾಗಿರುವ ಸ್ವರ್ಣಾ ನದಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಪ್ರಮುಖ ಆಧಾರವಾಗಿದೆ. ಕೃಷ್ಣಾಂಗಾರಕ ಚತುರ್ದಶಿಯ ಪವಿತ್ರ ದಿನದಂದು ದೇವಸ್ಥಾನದ ವತಿಯಿಂದ ಸ್ವರ್ಣಾ ನದಿಗೆ ಬಾಗಿನ ಸಮರ್ಪಿಸಿ, ನೂತನ ಸ್ನಾನ ಘಟ್ಟವನ್ನು ಭಕ್ತರ ಸೇವೆಗೆ ಅರ್ಪಿಸಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿಯೂ ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಲಾಗುವುದು” ಎಂದು ಹೇಳಿದರು.
ನೂತನ ಸ್ನಾನ ಘಟ್ಟದ ನಿರ್ಮಾಣದಿಂದ ಪ್ರತಿವರ್ಷ ತೀರ್ಥಸ್ನಾನಕ್ಕಾಗಿ ಆಗಮಿಸುವ ಸಾವಿರಾರು ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರೊಂದಿಗೆ ನದಿ ತೀರದ ಸುರಕ್ಷತೆ, ಸ್ವಚ್ಛತೆ ಹಾಗೂ ಮೂಲಸೌಕರ್ಯ ವ್ಯವಸ್ಥೆಯೂ ಮತ್ತಷ್ಟು ಸುಧಾರಣೆಯಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಅಜಿತ್ ಪೈ, ರಮೇಶ್ ರಾವ್, ಬಾಲಾಜಿ ರಾಘವೇಂದ್ರ ಆಚಾರ್ಯ, ಯುವ ಬ್ರಾಹ್ಮಣ ಪರಿಷತ್ನ ಶ್ರೀ ಚಂದ್ರಕಾಂತ ಕೆ.ಎನ್., ನಾಗರಾಜ ತಂತ್ರಿ, ಹರಿಕೃಷ್ಣ ಶಿವತ್ತಾಯ, ಪ್ರಶಾಂತ ಭಟ್ ಪೆರಂಪಳ್ಳಿ, ಅನಿಟ ಬೆಲಿಂಡಾ ಡಿಸೋಜಾ, ಮಂಜುನಾಥ ಮಣಿಪಾಲ, ಸುಮಾ, ವಿಜಯ ಪೂಜಾರಿ, ಶ್ರೀ ಗಣಪತಿ ಭಟ್, ಶ್ರೀ ವಾದಿರಾಜ ಆಚಾರ್ಯ, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಶಶಾಂಕ್ ಶಿವತ್ತಾಯ, ಗೋಪಾಲಾಚಾರ್ ಉಪಸ್ಥಿತರಿದ್ದರು.
