ಸಿ.ಟಿ. ರವಿಗೆ ನೋಟಿಸ್: ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕುವ ಯತ್ನ – ಯಶ್ಪಾಲ್ ಸುವರ್ಣ ಆಕ್ರೋಶ

ಸಿ.ಟಿ. ರವಿಗೆ ನೋಟಿಸ್: ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕುವ ಯತ್ನ – ಯಶ್ಪಾಲ್ ಸುವರ್ಣ ಆಕ್ರೋಶ

ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿರುವ ಕ್ರಮವನ್ನು ಖಂಡಿಸಿರುವ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುತ್ವವಾದಿ ನಾಯಕರ ಧ್ವನಿಯನ್ನು ಹತ್ತಿಕ್ಕುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಗೃಹ ಇಲಾಖೆ ಅಲ್ಪಸಂಖ್ಯಾತರ ತುಷ್ಟೀಕರಣ ಇಲಾಖೆಯಾಗಿ ಪರಿವರ್ತನೆಯಾಗಿದ್ದು, ಮತೀಯವಾದಿ ಶಕ್ತಿಗಳ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದರು. ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿದಿನ ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡುವುದನ್ನೇ ದಿನಚರಿಯನ್ನಾಗಿ ಮಾಡಿಕೊಂಡಿದ್ದು, ಪೊಲೀಸ್ ಇಲಾಖೆ ಕಾಂಗ್ರೆಸ್ ಕಾರ್ಯಕರ್ತರಂತೆ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳುತ್ತಿದೆ ಎಂದು ಯಶ್ ಪಾಲ್ ಸುವರ್ಣ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ರಾಷ್ಟ್ರವಿರೋಧಿ ಶಕ್ತಿಗಳು ನೀಟ್ ಪರೀಕ್ಷೆಯ ನೆಪದಲ್ಲಿ ವಿದ್ಯಾರ್ಥಿಗಳ ಮುಖವಾಡ ಧರಿಸಿ ಪ್ರತಿಭಟನೆ ನಡೆಸಿ ಉಗ್ರರ ಪರ ಘೋಷಣೆ ಕೂಗಿದ ಸಂದರ್ಭದಲ್ಲೂ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ, ಇದೀಗ ಸಿ.ಟಿ. ರವಿ ಅವರಿಗೆ ನೋಟಿಸ್ ನೀಡಲು ತುದಿಗಾಲಲ್ಲಿ ನಿಂತಿದೆ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದರೂ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಆದರೆ ಮತೀಯ ಶಕ್ತಿಗಳ ಓಲೈಕೆಗೆ ಮಾಜಿ ಸಚಿವರ ವಿರುದ್ಧ ನೋಟಿಸ್ ನೀಡಲು ಮುಂದಾಗಿದೆ ಎಂದು ಅವರು ಟೀಕಿಸಿದರು.

“ವಿನಾಶಕಾಲೇ ವಿಪರೀತ ಬುದ್ಧಿ” ಎಂಬಂತೆ ರಾಜ್ಯ ಸರ್ಕಾರ ಹದ್ದು ಮೀರಿ ವರ್ತಿಸುತ್ತಿದ್ದು, ರಾಷ್ಟ್ರೀಯವಾದಿ ಚಿಂತನೆಯ ಜನತೆ ಸಿ.ಟಿ. ರವಿ ಅವರೊಂದಿಗೆ ನಿಲ್ಲಲಿದ್ದಾರೆ. ಇಂತಹ ಸಾವಿರ ನೋಟಿಸ್‌ಗಳ ಮೂಲಕವೂ ಬಿಜೆಪಿ ನಾಯಕರ ಹೋರಾಟದ ಮನೋಭಾವವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಯಶ್ ಪಾಲ್ ಸುವರ್ಣ ಹೇಳಿದ್ದಾರೆ.