ಜೂ.28: ಉಡುಪಿ ಯಕ್ಷಗಾನ ಕಲಾರಂಗದಿಂದ ‘ಸೂರು ನೂರರ ಸಡಗರ’

ಜೂ.28: ಉಡುಪಿ ಯಕ್ಷಗಾನ ಕಲಾರಂಗದಿಂದ ‘ಸೂರು ನೂರರ ಸಡಗರ’

 

ಉಡುಪಿ ಯಕ್ಷಗಾನ ಕಲಾರಂಗದ ‘ವಿದ್ಯಾಪೋಷಕ್’ ಯೋಜನೆಯಡಿಯಲ್ಲಿ 100ರ ಮನೆ ಹಸ್ತಾಂತರ ಹಾಗೂ ಸೂರು ನೂರರ ಸಡಗರ ಕಾರ್ಯಕ್ರಮವನ್ನು ಜೂ. 28ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಉಡುಪಿ ಯಕ್ಷಗಾನ ಕಲಾರಂಗವು ಕಳೆದ 26 ವರ್ಷಗಳಿಂದ ಯಕ್ಷನಿಧಿಯ ಮೂಲಕ ಕಲಾವಿದರ ಕಲ್ಯಾಣಕ್ಕಾಗಿ ಹಾಗೂ 22 ವರ್ಷಗಳಿಂದ ವಿದ್ಯಾಪೋಷಕ್ ಯೋಜನೆಯಡಿ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸೇರಿದಂತೆ ವಿವಿಧ ರೀತಿಯ ಸಹಾಯಗಳನ್ನು ನೀಡುತ್ತಾ ಬಂದಿದೆ.

ಈ ಹಿನ್ನೆಲೆಯಲ್ಲಿ ಸಂಸ್ಥೆಯ ಮಹತ್ವದ ಸಾಧನೆಯಾಗಿ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ 90 ಮನೆಗಳು ಹಾಗೂ ಕಲಾವಿದರಿಗೆ 10 ಮನೆಗಳು ಸೇರಿದಂತೆ ಒಟ್ಟು 100 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಈ ಐತಿಹಾಸಿಕ ಸಾಧನೆಯನ್ನು ಆಚರಿಸಲು ‘ಸೂರು ನೂರರ ಸಡಗರ’ ಎಂಬ ವಿಶೇಷ ಕಾರ್ಯಕ್ರಮವನ್ನು ಜೂನ್ 28ರಂದು ಭಾನುವಾರ ಆಯೋಜಿಸಲಾಗಿದೆ.

ಅಂದು ಮಧ್ಯಾಹ್ನ 2ರಿಂದ 4 ಗಂಟೆವರೆಗೆ ಸಂಸ್ಥೆಯ ಐವೈಸಿ ಸಭಾಭವನದಲ್ಲಿ ಪ್ರಧಾನ ಸಮಾರಂಭ ನಡೆಯಲಿದೆ. ಉಡುಪಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ದೀಪ ಬೆಳಗಿಸಿ ಆಶೀರ್ವಚನ ನೀಡಲಿದ್ದಾರೆ. ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ.

ಮಂಗಳೂರಿನ ಕರ್ನಾಟಕ ಬ್ಯಾಂಕ್‌ನ ಎಂ.ಡಿ & ಸಿಇಓ ಶ್ರೀ ಎಂ. ರಾಘವೇಂದ್ರ ಭಟ್ ಅವರು ‘ಸೂರು ನೂರರ’ ಸಂಪುಟವನ್ನು ಬಿಡುಗಡೆ ಮಾಡಲಿದ್ದಾರೆ. ಗೀತಾನಂದ ಫೌಂಡೇಶನ್ ಕೋಟದ ಆನಂದ ಸಿ. ಕುಂದರ್ ಶುಭಾಶಂಸನೆ ನೀಡಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಶಾಸಕರುಗಳು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ನೂರು ಮನೆಗಳ ಪ್ರಾಯೋಜಕರು, ನಿರ್ಮಾಣಕ್ಕೆ ಸಹಕರಿಸಿದ ಕಾರ್ಮಿಕರು ಹಾಗೂ ಸಹಾಯಕರನ್ನು ಸನ್ಮಾನಿಸಲಾಗುವುದು. ಜೊತೆಗೆ ಫಲಾನುಭವಿಗಳಿಗೆ ಒಂದೊಂದು ಕಸಿ ಮಾವಿನ ಗಿಡವನ್ನು ವಿತರಿಸಲಾಗುವುದು.

ಅದೇ ದಿನ ಬೆಳಿಗ್ಗೆ 9.30ಕ್ಕೆ ಹೆಬ್ರಿ ತಾಲೂಕಿನ ಶಿವಪುರದ ಕಲ್ಕುಂಡದಲ್ಲಿ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾ ಅವರ ನೂರುನೇ ಮನೆ ‘ಶತಸ್ಮೃತಿ’ ಹಸ್ತಾಂತರ ನಡೆಯಲಿದೆ. ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಕಾರ್ಕಳ ಶಾಸಕರಾದ ಶ್ರೀ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಯಕ್ಷಗಾನ ಕಲಾರಂಗದ ನಾರಾಯಣ ಎಂ ಹೆಗಡೆ, ಸದಾಶಿವ ರಾವ್ ಮತ್ತು ವಿದ್ಯಾ ಪ್ರಸಾದ್ ಉಪಸ್ಥಿತರಿದ್ದರು.

 

© 2026 ನಮ್ಮ ವರ್ತಮಾನ :: copyright all right reserved.