ಅಪ್ರಾಪ್ತ ಬಾಲಕನ ಅಪಹರಣ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಅಪ್ರಾಪ್ತ ಬಾಲಕನ ಅಪಹರಣ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಕೇರಳದ ವುಡ್ ಕಂಪನಿಯಲ್ಲಿ ಬಲವಂತವಾಗಿ ಕೆಲಸಕ್ಕೆ ಸೇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಟಪಾಡಿ ನಿವಾಸಿ ಸುಚಿತ್ ನಾಯಕ್ ಮತ್ತು ವಾರಂಬಳ್ಳಿ ನಿವಾಸಿ ವಿಖ್ಯಾತ್ ಆಚಾರ್ಯ ಬಂಧಿತರು.
ಮಟಪಾಡಿ ಗ್ರಾಮದ ತಾರೇಶ್ (38) ಅವರ ಪುತ್ರ ತಿಲಕ್ (ಹೆಸರು ಬದಲಿಸಲಾಗಿದೆ), ಬ್ರಹ್ಮಾವರ ಸರ್ಕಾರಿ ಬೋರ್ಡ್ ಹೈಸ್ಕೂಲ್‌ನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಜೂನ್ 1ರಂದು ಬೆಳಿಗ್ಗೆ ಸುಮಾರು 8.30ಕ್ಕೆ ಬ್ರಹ್ಮಾವರ ಬಸ್ ನಿಲ್ದಾಣದಿಂದ ಆರೋಪಿಗಳು ಬಾಲಕನನ್ನು ಅಪಹರಿಸಿ ಕೇರಳ ರಾಜ್ಯದ ತಲಪಾಡಿ ಸಮೀಪದ ಕುಂಜತ್ತೂರು ಪದವು ಪ್ರದೇಶದಲ್ಲಿರುವ ವುಡ್ ಕಂಪನಿಗೆ ಬಲವಂತವಾಗಿ ಕರೆದೊಯ್ದು ಕೆಲಸಕ್ಕೆ ಸೇರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಾಲಕ ಮನೆಗೆ ಹೋಗುವುದಾಗಿ ಹೇಳಿದಾಗ, ಜೂನ್ 9ರಂದು ಮಧ್ಯಾಹ್ನ ಸುಮಾರು 1.30ಕ್ಕೆ ತಾವು ವಾಸವಿದ್ದ ಕೊಠಡಿಯಲ್ಲಿ ಆರೋಪಿತ ಸುಚಿತ್ ನಾಯಕ್ ವೈರ್‌ನಿಂದ ಹಲ್ಲೆ ನಡೆಸಿದ್ದು, ಮತ್ತೋರ್ವ ಆರೋಪಿ ವಿಖ್ಯಾತ್ ಆಚಾರ್ಯ ಚೂರಿ ತೋರಿಸಿ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದ್ದು, ಈ ಘಟನೆಯನ್ನು ಮುಸ್ತಾಕ್ ಎಂಬಾತ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 117/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 137(2), 115(2), 352, 351(3) ಸಹಿತ 3(5), ಬಾಲ ನ್ಯಾಯ (JJ) ಕಾಯ್ದೆಯ ಕಲಂ 75 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ಕಲಂ 3(1)(r), 3(1)(s), 3(2)(v-a) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣದ ಮೂರನೇ ಆರೋಪಿ ಬಾಲಾಪರಾಧಿಯಾಗಿರುವುದರಿಂದ ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ.

ಪ್ರಕರಣದ ಕುರಿತು ಬ್ರಹ್ಮಾವರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.